ಸಂತ ಜ್ಞಾನೇಶ್ವರ ಹಾಗೂ ಸಂತ ತುಕಾರಾಂ ಪಾಲಖೀ ಉತ್ಸವ - ಪಂಢರಾಪುರ ಯಾತ್ರೆ

ಸೋಮವಾರ, ಜುಲೈ 9, 2007 ·
ಸಂತರ ಭೂಮಿ ಎನಿಸಿಕೊಂಡಿರುವ ಮಹಾರಾಷ್ಟ್ರದಲ್ಲಿ, ಪ್ರತಿ ವರ್ಷ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದಲ್ಲಿ ಮರಾಠಿಗರು ಪಂಢರಾಪುರಕ್ಕೆ ಯಾತ್ರೆ ಕೈಗೊಳ್ಳುತ್ತಾರೆ. ಅದಕ್ಕೆ 'ವಾರಿ' ಎಂದು ಹೆಸರು. ವಾರಿಗೆ ಹೋಗುವವರು 'ವಾರಕರೀ'ಗಳು. ವಾರಕರೀ ಸಂಪ್ರದಾಯ ಮಹಾರಾಷ್ಟ್ರದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಗಳಲ್ಲಿ ಒಂದು. ಈ ನಾಡಿನ ಈರ್ವರು ಸಂತ ಶ್ರೇಷ್ಠರು ಸಂತ ಶ್ರೀ ತುಕಾರಾಂ ಹಾಗೂ ಸಂತ ಶ್ರೀ ಜ್ಞಾನೇಶ್ವರರ ಪದುಕೆಗಳನ್ನು ಹೊತ್ತ ಪಲ್ಲಕ್ಕಿ ರಥಗಳು ಈ ಯಾತ್ರೆಯ ಮುಂಚೂಣಿಯಲ್ಲಿರುತ್ತವೆ.

ಸಂತ ತುಕಾರಾಮರ ಕರ್ಮಭೂಮಿಯಾದ ದೇಹುವಿನಿಂದ 'ಸಂತ ತುಕಾರಾಂ ಪಾಲಖೀ' ಹೊರಟರೆ, ಸಂತ ಜ್ಞಾನೇಶ್ವರರ ಐಕ್ಯ ಸ್ಥಳ, ಆಳಂದಿಯಿಂದ 'ಸಂತ ಜ್ಞಾನೇಶ್ವರ ಪಾಲಖೀ' ಹೊರಡುತ್ತದೆ. ದೇಹು ಪುಣೆಯಿಂದ ಉತ್ತರಕ್ಕೆ ಸುಮಾರು ೨೫ ಕಿಮೀಗಳ ದೂರದಲ್ಲಿದ್ದರೆ, ಆಳಂದಿ ಪುಣೆಯ ಈಶಾನ್ಯಕ್ಕೆ ಸುಮಾರು ೨೨ ಕಿಮೀಗಳ ದೂರದಲ್ಲಿದೆ. ಎರಡೂ ಊರುಗಳು ಇಂದ್ರಾಯಿಣಿ ನದಿಯ ತಟದಲ್ಲಿವೆ.

ಸಂತ ತುಕಾರಾಮರ ಪಾಲಖೀ ಜ್ಯೇಷ್ಢ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ದೇಹುವಿನಿಂದ ಪಂಢರಾಪುರಕ್ಕೆ ಹೊರಡುತ್ತದೆ. ಸಂತ ಜ್ಞಾನೇಶ್ವರರ ಪಾಲಖೀ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ನವಮಿಯಂದು ಆಳಂದಿಯಿಂದ ಪಂಢರಾಪುರದ ಕಡೆ ತನ್ನ ವಾರ್ಷಿಕ ಯಾತ್ರೆಯನ್ನು ಪ್ರಾರಂಭಿಸುತ್ತದೆ. ಎರಡು ಪಾಲಖಿಗಳ ಜೊತೆಗೆ ಮಹಾರಾಷ್ಟ್ರದ ಮೂಲೆಮೂಲೆಗಳಿಂದ ಬಂದ ವಾರಕರೀಗಳು 'ವಾರಿ' ಕೈಗೊಳ್ಳುತ್ತಾರೆ. ಹಲವಾರು ಸುಮಾರು ೩೦೦ ದಿಂಡಿ ಮೇಳಗಳು ಪಾಲಖಿಗಳೊಟ್ಟಿಗೆ, ಯಾತ್ರೆಯಲ್ಲಿ ಪಾಲ್ಗೊಳ್ಳುತ್ತವೆ. ದಶಮಿಯಂದು ಪಾಲಖಿಗಳು ಪುಣೆಯನ್ನು ಪ್ರವೇಶಿಸುತ್ತವೆ. ಏಕಾದಶಿಯಂದು ವಿಶ್ರಮಿಸಿ, ದ್ಷಾದಶಿಯಂದು ಪುಣೆಯಿಂದ ಹೊರಟು, ಸುಮಾರು ೨೦ ದಿನಗಳ ಪ್ರಯಾಣದ ನಂತರ ಆಷಾಢ ಏಕಾದಶಿಯಂದು ಪಾಲಖಿಗಳು ಪಂಢರಾಪುರವನ್ನು ತಲುಪುತ್ತವೆ.

೨೦೦೭ರ ಸಾಲಿನ ಯಾತ್ರೆಯು ೦೭-೦೭-೨೦೦೭ ರ ಶನಿವಾರದಂದು, ಸಂತ ತುಕಾರಾಮರ ಪಾಲಖಿಯ ಪ್ರಸ್ಥಾನದೊಂದಿಗೆ ಪ್ರಾರಂಭವಾಯಿತು. ೦೮-೦೭-೨೦೦೭ ರ ಭಾನುವಾರದಂದು, ಸಂತ ಜ್ಞಾನೇಶ್ವರರ ಪಾಲಖಿಯು ಯಾತ್ರೆಯನ್ನು ಪ್ರಾರಂಭಿಸಿತು. ೦೯-೦೭-೨೦೦೭ರ ಸೋಮವಾರ ಸಂಜೆ ಎರಡೂ ಪಾಲಖಿಗಳು ಪುಣೆ ನಗರವನ್ನು ಪ್ರವೇಶಿಸಿದವು. ಭಕ್ತಿ ರಸ ಉಕ್ಕಿ ಹರಿದು, ವಾರಕರಿಗಳ ಗಾಯನ, ತಾಳ, ಮೃದಂಗ ವಾದನಗಳೊಂದಿಗೆ ಮತ್ತಷ್ಟು ಉತ್ತುಂಗಕ್ಕೇರಿತ್ತು.
| More

ಕಾಮೆಂಟ್‌‌ ಪೋಸ್ಟ್‌ ಮಾಡಿ

 

SKY DASHBOARD | Copyright © 2009 - Blogger Template Designed By BLOGGER DASHBOARD